ಶ್ರೀ ಮದ್ದುರಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ. ಕರಗ ಮಹೋತ್ಸವ ಹಾಗೂ ದೀಪೋತ್ಸವ . ಕೊಡತಿ ಗ್ರಾಮ ವರ್ತೂರು ಹೋಬಳಿ ಬೆಂಗಳೂರು ಪೂರ್ವ ತಾಲೂಕು. ಕೊಡತಿ ಗ್ರಾಮದ ಮದ್ದೂರಮ್ಮ ಜಾತ್ರೆಗೆ ಕಳೆ ತಂದ ಶ್ರೀಕೃಷ್ಣ ಸಂಧಾನ ನಾಟಕ..!

ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು, ಬೇಸಿಗೆಯ ಜೊತೆಗೆ ಊರ ಹಬ್ಬಗಳೂ ಸಹ ಜೋರಾಗ್ತವೆ. ರಾಜ್ಯದ ಪ್ರತೀ ಗ್ರಾಮಗಳಲ್ಲೂ ತಮ್ಮತಮ್ಮ ಊರ ದೇವರ ಜಾತ್ರೆ, ಉತ್ಸವ, ಹಬ್ಬಗಳು ಜರುಗುತ್ತವೆ. ದೂರದ ಊರುಗಳಿಂದ ತಮ್ಮ ನೆಂಟರನ್ನು ಕರೆಸಿ, ಸ್ನೇಹಿತರನ್ನೂ ಆಹ್ವಾನಿಸಿ, ಊರಲ್ಲಿರುವ ಜನರೆಲ್ಲಾ ಜಾತಿ-ಧರ್ಮ-ಬಡವ ಶ್ರೀಮಂತನೆಂಬ ಭೇದಭಾವ ಬಿಟ್ಟು ಎಲ್ಲರೂ ಒಟ್ಟಾಗಿ ಒಂದಾಗಿ ಊರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಒಂದು ರೀತಿಯಲ್ಲಿ ಈ ಜಾತ್ರೆ-ಉತ್ಸವಗಳು ಗ್ರಾಮದಲ್ಲಿನ ಒಗ್ಗಟ್ಟಿಗೆ ಸಾಮರಸ್ಯಕ್ಕೆ ಸಹಬಾಳ್ವೆಗೆ ವೇದಿಕೆಯಾಗುತ್ತದೆ. ಗ್ರಾಮದೇವತೆಯ ಉತ್ಸವ ಜಾತ್ರೆ ಮೆರವಣಿಗೆಯ ಜೊತೆಗೆ ಚಿಕನ್ ಮಟನ್ ಭೋಜನವೂ ಸಹ ಎಲ್ಲರ ಮನೆಯಲ್ಲೂ ಘಮಘಮಿಸುತ್ತದೆ. ಇದರ ಜೊತೆಗೆ ರಾತ್ರಿ ಹೊತ್ತು ಗ್ರಾಮದವರೆಲ್ಲಾ ಸೇರಿ ಮಾಡುವ ನಾಟಕವಂತೂ ಭರ್ಜರಿ ಮನರಂಜನೆ ನೀಡುತ್ತದೆ. ಅದಕ್ಕಾಗಿಯೇ ಒಂದು ತಿಂಗಳಿನಿಂದ ನಾಟಕಾಭ್ಯಾಸ ಮಾಡಿರ್ತಾರೆ. ಕುರುಕ್ಷೇತ್ರ, ಮಹಾಭಾರತ ಸೇರಿದಂತೆ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳ ಅಬ್ಬರ ಊರ ಹಬ್ಬದ ಪ್ರಮುಖ ಆಕರ್ಷಣೆಯಾಗಿರುತ್ತದೆ. ರಾತ್ರಿ ಬಾಡೂಟ ಮುಗಿಸಿ ವೇದಿಕೆಯ ಮುಂದೆ ಚಾಪೆ, ಕುರ್ಚಿ ಹಾಕೊಂಡು ನಾಟಕ ನೋಡಲು ಕೂತರೆ ಸಾಕು, ರಾತ್ರಿಪೂರ್ತಿ ನಾಟಕ ನೋಡುತ್ತಾ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾ, ಆಗಾಗ ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಪ್ರೇಕ್ಷಕರು ಒಳ್ಳೆಯ ಟೈಂಪಾಸ್ ಮಾಡ್ತಾರೆ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು.
ಇದೀಗ ಅಂಥದ್ದೇ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಬೆಂಗಳೂರು ಪೂರ್ವ ತಾಲ್ಲೂಕಿಗೆ ಬರುವ ವರ್ತೂರು ಹೋಬಳಿಯ ಕೊಡತಿ ಗ್ರಾಮ. ಈಗಷ್ಟೆ ಇಲ್ಲಿ ಶ್ರೀ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದಿದ್ದು, ಕರಗೋತ್ಸವ ಮತ್ತು ದೀಪೋತ್ಸವ ಕೂಡ ಭರ್ಜರಿಯಾಗಿ ನಡೆಯಿತು. ಇದಕ್ಕೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನ ಸಾಕ್ಷಿಯಾದರು. ಅದರಲ್ಲೂ ಈ ಜಾತ್ರೆಯಲ್ಲಿ ಮಾಡಿದ ಶ್ರೀಕೃಷ್ಣ ಸಂಧಾನ ನಾಟಕ ಪ್ರಮುಖ ಆಕರ್ಷಣೆಯಾಗಿತ್ತು. ಅದರಲ್ಲೂ ಕೊಡತಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾದ ಕೆ.ಆರ್.ರಮೇಶ್ ರವರು ಶ್ರೀಕೃಷ್ಣನ ಪಾತ್ರದಲ್ಲಿ ರಾರಾಜಿಸಿದರು. ಪಾತ್ರದ ‌ಪರಕಾಯ ಪ್ರವೇಶ ಮಾಡಿದ ಮಂಜುನಾಥ್ ಕೆಪಿ ಸೂತ್ರಧಾರಿ ವೇಷ ಧರಿಸಿ ಭರ್ಜರಿ ಡೈಲಾಗ್ ಗಳನ್ನು ವೇದಿಕೆಯ ಮೇಲೆ ನಿಂತು ಖಡಕ್ಕಾಗಿ ಹೇಳಿದರು. ಇವರ ಅಮೋಘ ಅಭಿನಯನ್ನು ಕಂಡ ಗ್ರಾಮಸ್ಥರು ಭರ್ಜರಿ ಶಿಳ್ಳೆ ಚಪ್ಪಾಳೆಯ ಮೂಲಕ ಹುರಿದುಂಬಿಸಿದರು. ಥೇಟ್ ಕೃಷ್ಣನಂತೆಯೇ ಕಾಣುತ್ತಿದ್ದ ತಮ್ಮೂರಿನ ಮಾಜಿ ಗ್ರಾಮಪಂಚಾಯ್ತಿ ಅಧ್ಯಕ್ಷನ ನಟನೆಯನ್ನು ಕಂಡು ಗ್ರಾಮಸ್ಥರು ಬೆರಗಾದರು. ಶ್ರೀ ಕೆ.ಪಿ.ವಸಂತ್ ಕುಮಾರ್ ರವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ ಈ ಶ್ರೀಕೃಷ್ಣ ಸಂಧಾನ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಹಾಗೂ ಪ್ರಶಂಸೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *